'ಸಂಚಾರಿ ವಿಜಯ್' ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ (೧೫ ಜುಲೈ ೧೯೮೩ - ೧೫ ಜೂನ್ ೨೦೨೧) ಒಬ್ಬ ಚಲನಚಿತ್ರ ಮತ್ತು ರಂಗಭೂಮಿ ನಟ. ಸಂಚಾರಿ ಹೆಸರಿನ ನಾಟಕತಂಡದಲ್ಲಿ ಇವರು ಒಬ್ಬರಾಗಿದ್ದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ೨೦೧೪ರ ಸಾಲಿನ ೬೨ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ,. == ಆರಂಭಿಕ ಜೀವನ ಮತ್ತು ಶಿಕ್ಷಣ == ಇವರು ಜುಲೈ ೧೭, ೧೯೮೩ರಂದು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಹುಟ್ಟಿದರು, ಪಂಚನಹಳ್ಳಿ ಗ್ರಾಮದಲ್ಲಿ ಬೆಳೆದರು. ಇವರ ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ. == ನಟನಾ ವೃತ್ತಿ == ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ ಎರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದಾರೆ. ಒಬ್ಬ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನೆಮದಲ್ಲಿಯೂ ಕೆಲಸ ಮಾಡಿದ್ದಾರೆ. == ಸಂಗೀತ ಕ್ಷೇತ್ರ == ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿರುವ ಇವರು, ಹಲವಾರು ನಾಟಕಗಳಲ್ಲಿ ಹಾಡಿದ್ದು, ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಹಿಸಿದ್ದಾರೆ. == ರಂಗಭೂಮಿ == === ನಟನೆ === ಸಾವು ಧ್ಯೇಯಕ್ಕಿಲ್ಲ ಸಾಂಬಶಿವ ಪ್ರಹಸನ ಸ್ಮಶಾನ ಕುರುಕ್ಷೇತ್ರ ಸಾವಿರದವಳು ಪ್ಲಾಸ್ಟಿಕ್ ಭೂತ ಶೂದ್ರ ತಪಸ್ವಿ ಸತ್ಯಾಗ್ರಹ ಸಂತೆಯೊಳಗೊಂದು ಮನೆಯ ಮಾಡಿ ಮಾರ್ಗೊಸ ಮಹಲ್ ಮಹಾಕಾಲ ಅರಹಂತ ಕಮಲಮಣಿ ಕಾಮಿಡಿ ಕಲ್ಯಾಣ ನರಿಗಳಿಗೇಕೆ ಕೋಡಿಲ್ಲ ವ್ಯಾನಿಟಿ ಬ್ಯಾಗ್ ಪಿನಾಕಿಯೋ ಹೀಗೆರೆಡು ಕಥೆಗಳು ಹಳ್ಳಿಯೂರ ಹಮ್ಮೀರ ಶ್ರೀದೇವಿ ಮಹಾತ್ಮೆ === ನಿರ್ದೇಶನ === ಪಿನಾಕಿಯೋ ಮಿಸ್ ಅಂಡರ್‌ಸ್ಟ್ಯಾಂಡಿಂಗ್ == ಕಿರುತೆರೆ == ನಗುನಗುತಾ ನಲಿ ಹೊಸ ಬಾಳಿಗೆ ನೀ ಜೊತೆಯಾದೆ ಪಂಚರಂಗಿ ಪೋಂ..ಪೋಂ ಪಾಂಡುರಂಗ ವಿಠಲ ಪಾರ್ವತಿ ಪರಮೇಶ್ವರ ಅನಾವರಣ == ಕಿರುಚಿತ್ರ == ರೌರವ ಟಿಕೆಟ್ ಮರ್ಡರ್ ಕವಲೊಡೆದ ದಾರಿ ಅಹಂ ಬ್ರಹ್ಮಾಸ್ಮಿ ಅಜ್ಜಿ ಕಥೆ == ಹಿರಿತೆರೆ == === ಪೋಷಕ ಪಾತ್ರ === ರಂಗಪ್ಪ ಹೋಗ್ಬಿಟ್ನಾ ರಾಮರಾಮ ರಘುರಾಮ ವಿಲನ್ ದಾಸ್ವಾಳ ಒಗ್ಗರಣೆ ಹೋಂ ಸ್ಟೇ ಸಿನೆಮಾ ಮೈ ಡಾರ್ಲಿಂಗ್ ಮಾರಿಕೊಂಡವರು ಸಿಪಾಯಿ ಶುದ್ಧಿ ಗೋದಿ ಬಣ್ಣ ಸಾಧಾರಣ ಮೈಕಟ್ಟು ಭಲೇ ಜೋಡಿ ಕಿಲ್ಲಿಂಗ್ ವೀರಪ್ಪನ್ ಅಲ್ಲಮ ವೈಟ್ ಹಾರ್ಸ್ == ಪ್ರಶಸ್ತಿ, ಪುರಸ್ಕಾರಗಳು == ೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇವರಿಗೆ ಕನ್ನಡದ ನಾನು ಅವನಲ್ಲ...ಅವಳು ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ. ಇದೇ ಪಟ್ಟಿಯಲ್ಲಿ, ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆಯಿತು. == ವಾಹನ ಅಪಘಾತ ಮತ್ತು ನಿಧನ == ಸಂಚಾರಿ ವಿಜಯ್ ಅವರು ಬೆಂಗಳೂರಿನಲ್ಲಿ ಸ್ನೇಹಿತನ ಜೊತೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಬಿದ್ದು ತೀವ್ರವಾಗಿ ಗಾಯಗೊಂಡರು. ಅವರ ಮೆದುಳಿಗೆ ಪೆಟ್ಟಾಗಿ ಕೋಮಾ ಸ್ಥಿತಿಗೆ ಹೋಗಿದ್ದರು. ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಸುಧಾರಣೆ ಕಾಣದೆ ಅವರ ಮೆದುಳು ನಿಷ್ಕ್ರಿಯವಾಗಿತ್ತು. (ಬ್ರೇನ್ ಡೆಡ್) .. ಅವರ ಕುಟುಂಬದವರ ಇಚ್ಛೆಯಂತೆ ಆಸ್ಪತ್ರೆಯಲ್ಲಿ ವಿಜಯ್ ಅವರ ಅಂಗಾಂಗದಾನ ಪ್ರಕ್ರಿಯೆಗಳನ್ನು ಕೈಗೊಂಡು ೧೫ ಜೂನ್ ೨೦೨೧ರ ಬೆಳಗಿನ ಜಾವ ಅವರು ಮರಣಹೊಂದಿದರೆಂದು ಘೋಷಿಸಲಾಯಿತು. == ಬಾಹ್ಯ ಕೊಂಡಿಗಳು == ಯಲ್ಲಿ ಸಂಚಾರಿ ವಿಜಯ್ ಬಗ್ಗೆ ಸಂಚಾರಿ ತಂಡದ ಬ್ಲಾಗ್ ತಾಣ == ಉಲ್ಲೇಖಗಳು ==